
ಕಡಲಾಮೆಯ 129 ಮೊಟ್ಟೆಗಳ ಸಂರಕ್ಷಣೆ
- Dec/23/2022
ಕಾರವಾರ ತಾಲ್ಲೂಕಿನ ಮಾಜಾಳಿಯ ಕಡಲತೀರದಲ್ಲಿ ಸೋಮವಾರ ನಸುಕಿನಲ್ಲಿ ಆಲಿವ್ ರಿಡ್ಲೆ ಕಡಲಾಮೆಯು ಇಟ್ಟ ಮೊಟ್ಟೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಂರಕ್ಷಿಸಿದರು
ತಾಲ್ಲೂಕಿನ ಮಾಜಾಳಿ ಕಡಲತೀರದಲ್ಲಿ ಆಲಿವ್ ರಿಡ್ಲೆ ಕಡಲಾಮೆಯು ಸೋಮವಾರ ನಸುಕಿನಲ್ಲಿ 129 ಮೊಟ್ಟೆಗಳನ್ನು ಇಟ್ಟಿದೆ. ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯು ಕ್ರಮ ಕೈಗೊಂಡಿದೆ.ಕಡಲಾಮೆಗಳು ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್‌ವರೆಗೆ ಸಂತಾನೋತ್ಪತ್ತಿ ಮಾಡುತ್ತವೆ. ಕಡಲತೀರಗಳಲ್ಲಿ ರಾತ್ರಿ ಜನಸಂಚಾರ ಸಂಪೂರ್ಣವಾಗಿ ನಿಂತ ಬಳಿಕ, ಮರಳಿನಲ್ಲಿ ಹೊಂಡ ಮಾಡಿ ಮೊಟ್ಟೆಯಿಟ್ಟು ಪುನಃ ಸಮುದ್ರಕ್ಕೆ ಹೋಗುತ್ತವೆ. 50ರಿಂದ 60 ದಿನಗಳಲ್ಲಿ ಮರಿಗಳು ಹೊರ ಬರುತ್ತವೆ.
ಕಾರವಾರ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಮರೈನ್ ವಿಭಾಗ) ಪ್ರಮೋದ್ ಹೆಚ್ಚಿನ ಮಾಹಿತಿ ನೀಡಿ, ‘ಉತ್ತರ ಕನ್ನಡದಲ್ಲಿ ಕಳೆದ ವರ್ಷ 1,500ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಲಾಗಿತ್ತು. ಸುಮಾರು 1,300 ಮರಿಗಳನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬಿಡಲಾಗಿತ್ತು. ಕಡಲಾಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಬಂಧ ಒಂದರ ಅಡಿಯಲ್ಲಿ ಸಂರಕ್ಷಿಸಲಾಗಿದೆ. ಆಮೆಗಳು ಮೊಟ್ಟೆ ಇಡಲು ಮುಂದಿನ ದಿನಗಳಲ್ಲಿ ತೀರಕ್ಕೆ ಬರುವ ಸಾಧ್ಯತೆಯಿದೆ. ಸಾರ್ವಜನಿಕರು ಅವುಗಳನ್ನು ಕಂಡರೆ ಇಲಾಖೆಗೆ ಮಾಹಿತಿ ನೀಡಿ ಸಂರಕ್ಷಣೆಗೆ ಸಹಕರಿಸಬೇಕು’ ಎಂದು ಅವರು ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಕಾರವಾರ ತಾಲ್ಲೂಕಿನ ದೇವಭಾಗ ಹಾಗೂ ಮಾಜಾಳಿ, ಅಂಕೋಲಾ ತಾಲ್ಲೂಕಿನ ಭಾವಿಕೇರಿ ಕಡಲತೀರಗಳು, ಹೊನ್ನಾವರ ತಾಲ್ಲೂಕಿನ ಟೊಂಕಾ ಪ್ರದೇಶಗಳು ಕಡಲಾಮೆಗಳು ಮೊಟ್ಟೆಯಿಡುವ ಪ್ರದೇಶಗಳಾಗಿ ಗುರುತಿಸಿಕೊಂಡಿವೆ. ರಾಜ್ಯ ಅರಣ್ಯ ಇಲಾಖೆಯಲ್ಲಿ ಸಮುದ್ರ ಜೀವಿಗಳ ಸಂರಕ್ಷಣೆಗಾಗಿ ಕಳೆದ ಸಾಲಿನಿಂದ ಕರಾವಳಿ ಮತ್ತು ಸಮುದ್ರ ಜೀವಿ ಪರಿಸರ ವ್ಯವಸ್ಥೆ ಪ್ರತ್ಯೇಕ ಘಟಕ ಕಾರ್ಯ ನಿರ್ವಹಿಸುತ್ತಿದೆ.