ನಮ್ಮ ಬಗ್ಗೆ
ಆತ್ಮೀಯ ಓದುಗ ಪ್ರಭುಗಳೇ, ‘ಶಿರಸಿ ಸಮಾಚಾರ ವಾರಪತ್ರಿಕೆ ಹುಟ್ಟಿನ ಜಾತಕ ನೋಡಿದರೆ ೧೯೫೬ನೇ ಇಸ್ವಿ, ಆದರೆ ಆರ್.ಎನ್.ಐ. ದೆಹಲಿ ನೋಂದಣಿ ದಾಖಲೆಯಂತೆ ೧೯೫೮. ಸರ್ಕಾರದ ನೋಂದಣಿಯೇ ನಮ್ಮ ಅಧಿಕೃತ ದಾಖಲೆಯಾದರೂ ‘ಶಿರಸಿ ಸಮಾಚಾರ’ಕ್ಕೆ ಈಗ ೬೪ ವರುಷದ ಇತಿಹಾಸ. ಆ ದಿನಗಳಲ್ಲಿ ಶಿರಸಿ ಸಮಾಚಾರ ವಾರಪತ್ರಿಕೆ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಮಾರ್ದನಿಯಾಗಿ ಮಿಂಚಿದ್ದು ಸುಳ್ಳಲ್ಲ. ಅಂದಿನಿಂದ-ಇಂದಿನವರೆಗೂ ಹೇಳುವ ಘಟ್ಟದ ಮೇಲಿನ, ಘಟ್ಟದ ಕೆಳಗಿನ ನಾಮಾಂಕಿತ ಪತ್ರಕರ್ತರು, ಸಾಹಿತಿಗಳ ಬರಹ, ಹೋರಾಟಗಳಿಗೆ ಧ್ವನಿಯಾದ ಪತ್ರಿಕೆಯ ಎನ್ನುವ ಹೆಗ್ಗಳಿಕೆ. ‘ಶಿರಸಿ ಸಮಾಚಾರ’ ಯುವ ಬರಹಗಾರರನ್ನು ಪೋಷಿಸಿದ ತೊಟ್ಟಿಲು.
ಕಳೆದ ಮೂರುವರೆ ದಶಕದಿಂದ ಬರಹ, ಪತ್ರಿಕೋದ್ಯಮ ವಿದ್ಯಾರ್ಥಿಯಾದ ನನಗೆ ‘ಶಿರಸಿ ಸಮಾಚಾರ’ಕ್ಕೆ ಹೊಸ ಚೌಕಟ್ಟು ತೊಡಿಸುವ ಹೆಬ್ಬಯಕೆ. ಶಿರಸಿಯ ಶೃಂಗಕ್ಕೆ ಹೊಸ ಗರಿಯನ್ನು ತೊಡಿಸುವ ಆಸೆ. ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶ ನೆನಪಿಸಿಕೊಳ್ಳುವ ಮೌಲ್ಯಾಧಾರಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ ಆಶಯದಂತೆ ಗಜಾನನ ಶರ್ಮಾ ಕಲ್ಲಾಳ, ಕೆ.ಕೆ. ಕೊಠಾರಿ, ಜಿ.ಎಸ್. ಹೆಗಡೆ ಅಜ್ಜೀಬಳ, ಯಶವಂತ ಹೆರವಟ್ಟಾ, ಶ್ರೀಪಾದ ಹೆಗಡೆ ಕಡವೆ, ಎಸ್.ಜಿ. ಹೂತನ್, ಪ.ಸು. ಭಟ್ಟ ಸೇರಿದಂತೆ ಎಂಟು ಜನ ಶಿರಸಿಯ ನಾಮಾಂಕಿತ ಕೀರ್ತಿಶೇಷರು ತಲಾ ೧೦ ರೂಪಾಯಿ ಭರಿಸಿ, ಜೂನ್ ೨೭, ೧೯೫೬ರಂದು ಪ್ರಥಮ ಸಂಚಿಕೆ ಹೊರತರುತ್ತಾರೆ. ನಂತರ ಮಲೆನಾಡು ಸೇವಾ ಸಮಿತಿ ರಚನೆಗೊಂಡು ಪತ್ರಿಕೆಯ ಸುಗಮ ಪ್ರಕಟಣೆ ಆರಂಭವಾಗುತ್ತದೆ. ಕೆ.ಕೆ. ಕೊಠಾರಿ ಪ್ರಥಮ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಾರೆ. ನಂತರ, ಪ.ಸು. ಭಟ್ಟ, ಸೀತಾರಾಮ ಹೆಗಡೆ ಹೀಪನಳ್ಳಿ, ಎಸ್.ಜಿ. ಹೂತನ್, ಮಂಜುನಾಥ ಭಟ್ ಬೆಳಖಂಡ, ಆರ್.ವಿ. ಭಾಗ್ವತ್, ಹಿತೇಂದ್ರ ಶಾಸ್ತಿç, ಗಂಗಾಧರ ಶಾಸ್ತಿç ನಾಜಗಾರ ಸಂಪಾದಕತ್ವದಲ್ಲಿ ‘ಶಿರಸಿ ಸಮಾಚಾರ’ ಪ್ರಕಟವಾಗಿ ಜಿಲ್ಲಾ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದು ಒಂದು ದಂತಕಥೆ.
ಮಲೆನಾಡು ಸೇವಾ ಸಮಿತಿಯ ಹಾಲಿ ಸದಸ್ಯರಾದ ಸಹಕಾರಿ ರತ್ನ ಜಿ.ಎಂ. ಹೆಗಡೆ ಹುಳಗೋಳ, ಖ್ಯಾತ ಅಡಿಕೆ ವ್ಯಾಪಾರಿ ಡಿ.ಜಿ. ಹೆಗಡೆ ಭೈರಿ, ಕಾಂಮ್ಕೋ ಮಾಜಿ ಅಧ್ಯಕ್ಷ ಎಂ.ಎನ್. ಹೆಗಡೆಯವರ ಬಳಿ ‘ಶಿರಸಿ ಸಮಾಚಾರ’ ವಾರ ಪತ್ರಿಕೆಯನ್ನು ದಿನ ಪತ್ರಿಕೆ ಮಾಡುವ ಮನದಾಸೆಯನ್ನು ನಾನು ವ್ಯಕ್ತಪಡಿಸಿದ್ದೆ. ತುಂಬಾ ಸಂತೋಷದಿAದ ಮಲೆನಾಡು ಸೇವಾ ಸಮಿತಿ ಪ್ರಕಟಣೆಯ ‘ಶಿರಸಿ ಸಮಾಚಾರ’ದ ಹಕ್ಕನ್ನು ಬಕ್ಕಳ ಪ್ರಿಂಟ್ ಮೀಡಿಯಾಕ್ಕೆ ವರ್ಗಾಯಿಸಿಕೊಟ್ಟು ಶುಭ ಹಾರೈಸಿದರು. ಹಾಗಾಗಿ ಈ ಪತ್ರಿಕೆ ಪುನರಪಿ ಜನನ ಕಾಣುವಂತಾಯಿತು. ಹಲವು ವರ್ಷಗಳ ಕಾಲ ಹಳೆಯ ಸಂಪುಟ, ಕಾಗದಪತ್ರ, ಆರ್.ಎನ್.ಐ. ನೋಂದಣಿ ಪತ್ರ ಕಾದಿಟ್ಟು ಪತ್ರಿಕೆಯ ಪ್ರಕಟಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡ ಕೃಷ್ಣಮೂರ್ತಿ ದೀಕ್ಷಿತ್‌ರ ಸಹಕಾರ, ಆತ್ಮೀಯ ವಿ.ಎಂ. ಹೆಗಡೆ ಕಬ್ಬೆಯವರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ನೆನೆಯಬೇಕು. ಪತ್ರಿಕೆಗೆ ಓದುಗರಿಲ್ಲ ಎನ್ನುವ ಮಾತನ್ನು ನಾನು ಒಪ್ಪುತ್ತಿಲ್ಲ. ಪತ್ರಿಕೆಯ ಪ್ರಕಾಶಕರಿಗೆ ಇಂದು ಓದುಗರಿಕೆ ಸಕಾಲಕ್ಕೆ ತಲುಪಿಸಲು ಸಾಧ್ಯವಾಗದ ಪ್ರಮೇಯ ಹೆಚ್ಚು. ಓದುಗರ ದೃಷ್ಟಿಯಿಂದ ಮನೆಯ ಟಿಪಾಯಿಯ ಮೇಲೆ ಪತ್ರಿಕೆ ಕಣ್ಮರೆಯಾದರೂ ಆಧುನಿಕ ತಂತ್ರಜ್ಞಾನದ ಅಂಗವಾದ ಮೊಬೈಲ್‌ನಲ್ಲಿ ಪೇಪರ್ ಓದುವ, ಇ-ಪೇಪರ್‌ನ್ನು ಅಂತರ್ಜಾಲದಲ್ಲಿ ವೀಕ್ಷಿಸುವವರ ಸಂಖ್ಯೆ, ಕೈಯಲ್ಲಿ ಪೇಪರ್ ಹಿಡಿದು ಓದುವವರಿಗಿಂತ ನೂರುಪಟ್ಟು ಹೆಚ್ಚು ಅಕ್ಷರ ಅಭಿಮಾನಿಗಳಿದ್ದಾರೆ. ಹಾಗಾಗಿ ಪತ್ರಿಕೋದ್ಯಮಕ್ಕೆ ಸೋಲಾಗದು. ಪತ್ರಿಕೋದ್ಯಮಿಗಳಾದ ನಾವು ಕಾಲಕ್ಕೆ ತಕ್ಕಹಾಗೆ ಓದುಗರ ಅಭಿರುಚಿ ಅರಿತು ಬದಲಾಗಬೇಕಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿದ್ದು ೧೮೮೫ರಲ್ಲಿ ‘ಹವ್ಯಕ ಸುಭೋಧ’ ವಾರ ಪತ್ರಿಕೆಯ ಮೂಲಕ. ಹೊನ್ನಾವರ ತಾಲೂಕಿನ ಕರ್ಕಿ ವೆಂಕಟ್ರಮಣ ಶಾಸ್ತಿç ಸೂರಿಯವರಿಂದ. ಇಂದಿನವರೆಗೆ ಜಿಲ್ಲೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಪತ್ರಿಕೆ ಅಕ್ಷರಾಭಿಮಾನಿಗಳ ಕಣ್ಣು ರೆಪ್ಪೆಯಲ್ಲಿ ತೇಲಿ ಹೋಗಿವೆ
ಕಳೆದ ಮೂರು ದಶಕಗಳಿಂದ ನಾನು ಪತ್ರಿಕಾ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದನ್ನು ಹೇಳಿಕೊಳ್ಳಬೇಕು. ೧೯೯೯ರಲ್ಲಿ ರಾಜ್ಯ ಮಟ್ಟದ ‘ಉದ್ಯಮದರ್ಶಿ’ ಮಾಸ ಪತ್ರಿಕೆಯನ್ನು ೧೩ ವರ್ಷಗಳ ಕಾಲ ನಡೆಸಿದೆ. ಮೂರು ವರ್ಷ ‘ಉಳುಮೆ’ ಸಾಹಿತ್ಯ ಮಾಸ ಪತ್ರಿಕೆ ನಡೆಸಿದೆ. ಎರಡು ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಕಪ್ಪು-ಬಿಳುಪು ‘ಜನಮಾಧ್ಯಮ’ ದಿನ ಪತ್ರಿಕೆಯನ್ನು ಖರೀದಿಸಿ, ನಾಲ್ಕು ಪುಟಕ್ಕೆ ವಿಸ್ತರಿಸಿ ಕಲರ್ ಮುದ್ರಣದೊಂದಿಗೆ (ಜಿಲ್ಲೆಯಲ್ಲಿ ಮೊದಲ ಕಲರ್ ಮುದ್ರಣ) ೫ ವರ್ಷ ನಡೆಸಿದೆ. ಕಳೆದ ೧೦ ವರ್ಷಗಳಿಂದ ಶಿರಸಿಯಲ್ಲಿ ಸ್ಥಳೀಯ ಚಾನಲ್ ‘ಸುಮುಖ’ ಟಿವಿ ನಡೆಸುತ್ತಿರುವೆ. ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟಾçನಿಕ್ ಮೀಡಿಯಾ ಅನುಭವ ಸಾಕಷ್ಟು ಕಲಿಸಿದೆ. ನಾಲ್ಕನೆಯ ಅವಧಿಗೆ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಕಾರ್ಯಕಾರಿಣಿ ಸದಸ್ಯನಾಗಿ ಎರಡು ಅವಧಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯನಾಗಿ ಪತ್ರಿಕೋದ್ಯಮದ ಒಳ-ಹೊರಗಿನ ಸಮಕಾಲೀನ ಅರಿವಿದೆ. ಪತ್ರಿಕೆಯ ಪ್ರಕಟಣೆ ಇಂದು ಸಾಹಸದ ಕೆಲಸವಲ್ಲ. ಓದುಗರ ಅಭಿಲಾಷೆ, ವಸ್ತುನಿಷ್ಠ ಬರಹ, ಸಮಾಜಮುಖಿ ಚಿಂತನೆ ಮೂಲಕ ಓದುಗರ, ಜಾಹೀರಾತುದಾರರ ಮನ ಗೆಲ್ಲಬೇಕಿದೆ. ಜಿಲ್ಲೆಯ ಅಕ್ಷರಾಭಿಮಾನಿಗಳು, ಸಂಘ ಸಂಸ್ಥೆ, ಉದ್ಯಮಿಗಳ ಸಹಕಾರ ‘ಶಿರಸಿ ಸಮಾಚಾರ’ಕ್ಕೆ ಬೇಕಾಗಿದೆ. `ಶಿರಸಿ ಸಮಾಚಾರ’ ಶಿರಸಿ ಪತ್ರಿಕೆ ಮಾತ್ರವಲ್ಲ. ಉತ್ತರ ಕನ್ನಡ ಜಿಲ್ಲೆಯಷ್ಟೇ ಅಲ್ಲ, ಪಕ್ಕದ ಜಿಲ್ಲೆಗೂ ಪ್ರಸರಣ ಮಾಡುವ ಪ್ರಯತ್ನ ನಮ್ಮದಾಗಲಿದೆ. ಹರಸಿ, ಹಾರೈಸಿ. ಸದಾ ನಮ್ಮೊಂದಿಗಿರಿ.