
ಸಮಾಜಮುಖಿ ಕಾರ್ಯಗಳನ್ನು ಮಾಡುವ ಕನಸುಗಳನ್ನು ಹೊಂದಿರುವ ಸಂಸ್ಥೆಗಳನ್ನು ಪ್ರೋತ್ಸಾಹಿಸಿ
- Feb/18/2023
ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಕನಸುಗಳನ್ನು ಹೊಂದಿರುವ ಸಂಸ್ಥೆಗಳನ್ನು ದಾನಿಗಳು ಪ್ರೋತ್ಸಾಹಿಸಿ, ಬೆಳೆಸುವ ಅಗತ್ಯವಿದೆ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ಮಾಗೋಡಿನ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಮಾಗೋಡಿನ ಇಬ್ಬನಿ ಫೌಂಡೇಷನ್ ಹಾಗೂ ಕಂಚನಳ್ಳಿಯ ಜನಪ್ರಿಯ ಟ್ರಸ್ಟ್ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೂಜೆ, ಯಾಗಗಳನ್ನು ಮಾಡುವುದು ಮಾತ್ರ ಧಾರ್ಮಿಕ ಕಾರ್ಯಗಳಲ್ಲ. ಕಲಾರಾಧನೆಯೂ ಯಜ್ಞದಂತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿ, ಇಬ್ಬನಿ ಫೌಂಡೇಷನ್ ಹಾಗೂ ಜನಪ್ರಿಯ ಟ್ರಸ್ಟ್ ನ ಮುಖ್ಯಸ್ಥರು ತಮ್ಮನ್ನು ಬೆಳೆಸಿದ ಸಮಾಜಕ್ಕೆ ತಮ್ಮಿಂದ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶ ಹೊಂದಿ, ಸಂಸ್ಥೆಗಳ ಮೂಲಕ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಮಾದರಿಯ ಕಾರ್ಯ ಎಂದರು.
ಹಿರಿಯ ಭಾಗವತ ವಿದ್ವಾನ್ ಗಣಪತಿ ಭಟ್ಟ, ವೇ.ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಭಾರತಿ ನೃತ್ಯ ಕಲಾ ಕೇಂದ್ರದ ಮುಖ್ಯಸ್ಥ ವಿ.ಟಿ.ಹೆಗಡೆ ತೊಂಡೆಕೆರೆ ಮಾತನಾಡಿದರು. ಇಬ್ಬನಿ ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಧಾರ್ಮಿಕ ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಲಾಯಿತು. ದೇವಸ್ಥಾನದ ಮೊಕ್ತೆಸರ ಗೋಪಾಲಕೃಷ್ಣ ಭಟ್ಟ, ಜನಪ್ರಿಯ ಟ್ರಸ್ಟ್ ನ ತಿಮ್ಮಣ್ಣ ಭಟ್ಟ, ಇಬ್ಬನಿ ಫೌಂಡೇಷನ್ ಗೌರವಾಧ್ಯಕ್ಷ ನರಸಿಂಹ ಹೆಗಡೆ ಹಾದಿಮನೆ ಉಪಸ್ಥಿತರಿದ್ದರು. ಇಬ್ಬನಿ ಫೌಂಡೇಷನ್ ಮುಖ್ಯಸ್ಥ ವಿ.ಎನ್.ಹೆಗಡೆ ಹಾದಿಮನೆ, ನಾರಾಯಣ ಭಟ್ಟ ದೇವದಮನೆ, ಮಂಜುನಾಥ ಜೋಶಿ ನಿರ್ವಹಿಸಿದರು.
ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ನಡೆದ ರಾಮ ನಿರ್ಯಾಣ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಮಹಾಬಲೇಶ್ವರ ಭಟ್ಟ ಬೆಳಶೇರ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಭಾಗವಹಿಸಿದ್ದರು. ರಾಮನಾಗಿ ರಾಧಾಕೃಷ್ಣ ಕಲ್ಚಾರ್, ಲಕ್ಷ್ಮಣನಾಗಿ ನರಸಿಂಹ ಭಟ್ಟ ಕುಂಕಿಮನೆ, ಕಾಲಪುರುಷನಾಗಿ ಮಂಜುನಾಥ ಗೋರಮನೆ, ದೂರ್ವಾಸನಾಗಿ ಲಕ್ಷ್ಮೀನಾರಾಯಣ ಭಟ್ಟ, ಊರ್ಮಿಳೆಯಾಗಿ ಮಂಜುನಾಥ ಜೋಶಿ, ಹನುಮಂತನಾಗಿ ನಾರಾಯಣ ಭಟ್ಟ ಮೊಟ್ಟೆಪಾಲ ಪಾತ್ರಚಿತ್ರಣ ನೀಡಿದರು.