
ನಟ ಅನಂತನಾಗ್ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ
- Feb/04/2023
ಭಾಷೆ, ಅಭಿನಯದ ಸೂಕ್ಷ್ಮತೆ ಅರಿತು ಪ್ರದರ್ಶನ ನೀಡಬೇಕು
ಹೊನ್ನಾವರದಲ್ಲಿ ಭಾಷೆ, ಅಭಿನಯದ ಸೂಕ್ಷ್ಮತೆ ಅರಿತು ಪ್ರದರ್ಶನ ನೀಡಬೇಕು' ಎಂದು ಚಿತ್ರಾಪುರ ಸಂಸ್ಥಾನ ಮಠಾಧೀಶ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ನುಡಿದರು.
ಗುಣವಂತೆಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ವತಿಯಿಂದ ಶುಕ್ರವಾರ ಆಯೋಜಿಸಿದ `ಕೆರೆಮನೆ ಶಂಭು ಹೆಗಡೆ ರಾಷ್ರ್ಟೀಯ ನಾಟ್ಯೋತ್ಸವ' ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಟ ಅನಂತನಾಗ್ ಅವರು ಅಭಿನಯದ ಸೂಕ್ಷ್ಮತೆ ಅರಿತು ಕಲಾಸಾಧನೆಯನ್ನು ಮಾಡಿದ್ದಾರೆ. ಅವರ ಸಾಧನೆ ಸ್ಮರಣೀಯವಾದುದು ಎಂದರು.
ಚಲನಚಿತ್ರ ನಟ ಅನಂತನಾಗ್ ಅವರಿಗೆ `ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಗಿಟ್ಟಿಸಿಕೊಳ್ಳಲೆಂದೆ ಕದ್ದುಮುಚ್ಚಿ ಲಾಭಿಗಳು ನಡೆಯುತ್ತಿದ್ದು, ಪ್ರಶಸ್ತಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಕೆರೆಮನೆಯಂತ ಕಲಾವೇದಿಕೆಯಲ್ಲಿ ಪ್ರಶಸ್ತಿ ದೊರೆತಿವುದು ನನಗೆ ಖುಷಿ ನೀಡಿದೆ ಎಂದರು. ಅದೇ ಸಾಮಯದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬಡ ಜನರು ಹಾಗೂ ಮಠಗಳಿಂದ ಕಲೆ, ಸಂಸ್ಕೃತಿ ಉಳಿದಿದೆ. ಕಲೆ ಹಾಗೂ ಸಂಸ್ಕೃತಿ ಬೆಳೆಯದಿದ್ದರೆ ಅಭಿವೃದ್ಧಿ ನಿರರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜಕ್ಕೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಸಚಿವ ವಿ. ಸುನೀಲ್‌ಕುಮಾರ್ ಮಾತನಾಡಿ, ಸಂಸ್ಕೃತಿ ಹಾಗೂ ಕಲೆಯ ಕಾರಣದಿಂದ ಭಾರತ ಜಗತ್ತನ್ನೆ ಗೆದ್ದಿದೆ. ಯಕ್ಷಗಾನದಲ್ಲಿ ಮಾತ್ರ ಶುದ್ದ ಕನ್ನಡ ಕಾಣಬಹುದು. ಯಕ್ಷಗಾನ ಕ್ಷೇತ್ರವನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದ ಆಗಬೇಕು ಎಂದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ ಕಲಾವಿದರನ್ನು ಶ್ರೀಮಂತಗೊಳಿಸಿದಾಗ ಮಾತ್ರ ಕಲೆ ಜೀವಂತವಾಗಿರಲು ಸಾಧ್ಯ. ಯಕ್ಷಗಾನ ಕಲೆಗೆ ನಮ್ಮ ಸಹಕಾರ ಕಡಿಮೆಯಾಗುತ್ತಿದ್ದು, ಕಲಾವಿದರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಗಂಡುಮೆಟ್ಟಿನ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಆಗಬೇಕಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಅನಂತ ಭಟ್ಟ ಹುಳಗೋಳ ಉಪಸ್ಥಿತರಿದ್ದರು. ಪತ್ರಕರ್ತ ಬಿ.ಗಣಪತಿ ಆಶಯ ನುಡಿಗಳನ್ನಾಡಿದರು. ಅಂಕಣಕಾರ ಎಂ.ಕೆ.ಭಾಸ್ಕರ್ ರಾವ್ ಅಭಿನಂದನಾ ನುಡಿಗಳನ್ನಾಡಿದರು. ಮಂಡಳಿಯ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ಸ್ವಾಗತಿಸಿ, ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.