
ಹಂಬಲ
- Jul/10/1968
ಕೊರಗದಿರು ಕಣ್ಣೀರ ಕರೆಯದಿರು, ಮುಂದೆಂದು
ಮುರುಗದಿರು ಓ ನನ್ನ ಮುದ್ದು ತಂಗಿ,
ಬಾಳ ದೇವಾಲಯದ ಬಾಗಿಲೊಳು ಕೈಮುಗಿದು
ನಿಂತವರ ನೋಡು ಬಾ ಬಹಳ ಮಂದಿ
ಹೂವಿನಂದದಿ ಬಾಳು ಬಾಡಿ ಉದುರುವಳೆಗೆ
ಕೊನೆಯಲ್ಲಿ ಮಣ್ಣಿನಲ್ಲಿ ಕೂಡಿ ಮುಗಿದು
ಎಲ್ಲ ಪಡೆದೈತಂದ ಮೂರು ದಿನದೀ ಭಾಗ್ಯ
ನಿಮಿಷ ನಿಮಿಷಕೆ ಸಾಯ ಬರಲು ಕೊನೆಯ
ಮನಸಿನಲಿ ಮನೆಮಾಡಿ ಕುಣಿಯುತಿಹ ನೂರೆಂಟು
ಭಾವಗಳ ಸೆಳೆವಿನಲ್ಲಿ ಸಿಲುಕಿ ಸವೆದು
ಆರಗೊಡದಿರು ತಂಗಿ ಬಾಳಿನಮೃತ ಬಿಂದು
ಬೆನ್ನ ಬಿಡದಿಹ ಘೋರ ಬಾಳ ನೆನೆದು
ಶಾಂತಿ ಸಾಗರದೆಡೆಯ ಬಿರುಗಾಳಿ ಚುಂಬಿಸಲು
ಪುಟದೇರಿ ಕೆಳಗಿಳಿನ ತೆಲೆಯ ಕೋಡು
ಕಷ್ಟ ಸುಖಗಳ ಅಲೆಯ ನುಂಗಿ ನಗುತಿದೆ ಕಡಲು
ಧೀರತೆಯ ಪಡೆದೊಮ್ಮೆ ನಕ್ಕು ನೋಡು
ನಮ್ಮವರು ನಿನ್ನವರು ಆಪ್ತಮಿತ್ರರು ಹಲರು
ಹಿಂದೋಡಿ ನಿಲ್ಲುವರು. ಸಮಯ ಬರಲು
ಯಾರಿಗಾಗೋ ಕಾವ ದೇವನೊಬ್ಬನೆ ಬಲ್ಲ
ಬೇರೆ ಹಂಬಲವೇಕೆ - ಅಡಿಗೆ ಎರಗು